ಕನ್ನಡ

ಸಮರುವಿಕೆಗೆ ಒಳಗಾಗುವುದು

ಮೇ 13, 2020
ಪಾಸ್ಕ ಕಾಲದ ಐದನೇ ವಾರದ ಬುಧವಾರ
ಇಂದಿನ ವಾಚನಗಳು

ಫಾತಿಮಾ ಮಾತೆ—ಐಚ್ಛಿಕ ಸ್ಮರಣೆ

“ನಾನೇ ನಿಜವಾದ ದ್ರಾಕ್ಷಾಲತೆ, ನನ್ನ ತಂದೆಯೇ ದ್ರಾಕ್ಷಿ ಬೆಳೆಗಾರರು. ನನ್ನಲ್ಲಿದ್ದು ಫಲಕೊಡದ ಪ್ರತಿಯೊಂದು ಕೊಂಬೆಯನ್ನೂ ಅವರು ತೆಗೆದುಹಾಕುತ್ತಾರೆ; ಫಲಕೊಡುವ ಪ್ರತಿಯೊಂದು ಕೊಂಬೆಯನ್ನೂ ಇನ್ನೂ ಹೆಚ್ಚು ಫಲಕೊಡುವಂತೆ ಸಮರುತ್ತಾರೆ.”  ಯೋಹಾನ 15:1–2

ನಿಮ್ಮನ್ನು ಸಮರಲು ಅವಕಾಶ ಕೊಡಲು ನೀವು ಸಿದ್ಧರಿದ್ದೀರಾ?  ಒಂದು ಗಿಡವು ಹೇರಳವಾಗಿ ಒಳ್ಳೆಯ ಹಣ್ಣುಗಳನ್ನು ಅಥವಾ ಸುಂದರವಾದ ಹೂಗಳನ್ನು ಬಿಡಬೇಕಾದರೆ ಅದನ್ನು ಸಮರುವುದು ಅಗತ್ಯ.  ಉದಾಹರಣೆಗೆ, ದ್ರಾಕ್ಷಾಲತೆಯನ್ನು ಸಮರದೆ ಬೆಳೆಯಲು ಬಿಟ್ಟರೆ, ಅದು ಯಾವುದಕ್ಕೂ ಉಪಯೋಗವಿಲ್ಲದ ಅನೇಕ ಸಣ್ಣ ದ್ರಾಕ್ಷಿಹಣ್ಣುಗಳನ್ನು ಬಿಡುತ್ತದೆ.  ಆದರೆ ದ್ರಾಕ್ಷಾಲತೆಯನ್ನು ಕಾಳಜಿಯಿಂದ ಸಮರಿದರೆ, ಅದು ಸಾಧ್ಯವಾದಷ್ಟು ಹೆಚ್ಚಿನ ಒಳ್ಳೆಯ ದ್ರಾಕ್ಷಿಹಣ್ಣುಗಳನ್ನು ಬಿಡುತ್ತದೆ.

ತಮ್ಮ ರಾಜ್ಯಕ್ಕಾಗಿ ಒಳ್ಳೆಯ ಫಲಕೊಡುವುದರ ಕುರಿತು ನಮಗೆ ಇಂಥದ್ದೇ ಪಾಠವನ್ನು ಕಲಿಸಲು ಯೇಸು ಈ ಸಮರುವಿಕೆಯ ಚಿತ್ರಣವನ್ನು ಬಳಸುತ್ತಾರೆ.  ನಮ್ಮ ಜೀವನವು ಫಲಪ್ರದವಾಗಿರಬೇಕೆಂದು ಅವರು ಬಯಸುತ್ತಾರೆ; ಲೋಕದಲ್ಲಿ ತಮ್ಮ ಅನುಗ್ರಹದ ಶಕ್ತಿಯುತ ಸಾಧನಗಳಾಗಿ ನಮ್ಮನ್ನು ಬಳಸಲು ಅವರು ಬಯಸುತ್ತಾರೆ.  ಆದರೆ ಕಾಲಕಾಲಕ್ಕೆ ಆಧ್ಯಾತ್ಮಿಕ ಸಮರುವಿಕೆಯ ಶುದ್ಧೀಕರಣಕ್ಕೆ ಒಳಗಾಗಲು ನಾವು ಸಿದ್ಧರಿಲ್ಲದಿದ್ದರೆ, ದೇವರು ಬಳಸಬಹುದಾದ ಸಾಧನಗಳಾಗಿ ನಾವು ಇರುವುದಿಲ್ಲ.  

ಸದ್ಗುಣಗಳು ಸರಿಯಾಗಿ ಪೋಷಿಸಲ್ಪಡುವಂತೆ ನಮ್ಮ ಜೀವನದಲ್ಲಿನ ದುರ್ಗುಣಗಳನ್ನು ದೇವರು ತೆಗೆದುಹಾಕಲು ಅವಕಾಶ ಕೊಡುವುದೇ ಆಧ್ಯಾತ್ಮಿಕ ಸಮರುವಿಕೆ.  ವಿಶೇಷವಾಗಿ, ಅವರು ನಮ್ಮನ್ನು ವಿನಮ್ರಗೊಳಿಸಲು ಮತ್ತು ನಮ್ಮ ಅಹಂಕಾರವನ್ನು ಕಳಚಿಹಾಕಲು ಅವಕಾಶ ಕೊಡುವುದರ ಮೂಲಕ ಇದು ನಡೆಯುತ್ತದೆ.  ಇದು ನೋವನ್ನು ಉಂಟುಮಾಡಬಹುದು; ಆದರೆ ದೇವರಿಂದ ವಿನಮ್ರಗೊಳಿಸಲ್ಪಡುವಾಗ ಉಂಟಾಗುವ ನೋವು ಆಧ್ಯಾತ್ಮಿಕ ಬೆಳವಣಿಗೆಗೆ ಒಂದು ಕೀಲಿಕೈ.  ದೀನತೆಯಲ್ಲಿ ಬೆಳೆಯುತ್ತಾ ಹೋದಂತೆ, ನಾವು ನಮ್ಮನ್ನೇ, ನಮ್ಮ ಸ್ವಂತ ಆಲೋಚನೆಗಳನ್ನು ಮತ್ತು ನಮ್ಮ ಸ್ವಂತ ಯೋಜನೆಗಳನ್ನು ಅವಲಂಬಿಸುವ ಬದಲು, ನಮ್ಮ ಪೋಷಣೆಯ ಮೂಲವನ್ನು ಇನ್ನಷ್ಟು ಅವಲಂಬಿಸುತ್ತೇವೆ.  ದೇವರು ನಮಗಿಂತ ಅನಂತವಾಗಿ ಹೆಚ್ಚು ಜ್ಞಾನವುಳ್ಳವರು. ನಮ್ಮ ಮೂಲವಾಗಿ ನಾವು ನಿರಂತರವಾಗಿ ಅವರ ಕಡೆಗೆ ತಿರುಗಲು ಸಾಧ್ಯವಾದರೆ, ನಾವು ಇನ್ನಷ್ಟು ಬಲಿಷ್ಠರಾಗುತ್ತೇವೆ ಮತ್ತು ನಮ್ಮ ಮೂಲಕ ಮಹತ್ಕಾರ್ಯಗಳನ್ನು ಮಾಡಲು ಅವರಿಗೆ ಅವಕಾಶ ಕೊಡುವುದಕ್ಕೆ ಇನ್ನಷ್ಟು ಸಿದ್ಧರಾಗುತ್ತೇವೆ.  ಆದರೆ ಮತ್ತೆ ಹೇಳುವುದಾದರೆ, ಇದಕ್ಕಾಗಿ ಅವರು ನಮ್ಮನ್ನು ಸಮರಲು ನಾವು ಅವಕಾಶ ಕೊಡಬೇಕು.

ಆಧ್ಯಾತ್ಮಿಕ ಸಮರುವಿಕೆಗೆ ಒಳಗಾಗುವುದು ಎಂದರೆ ನಮ್ಮ ಸ್ವಂತ ಇಚ್ಛೆಯನ್ನೂ ನಮ್ಮ ಸ್ವಂತ ಆಲೋಚನೆಗಳನ್ನೂ ನಾವು ಮನಃಪೂರ್ವಕವಾಗಿ ಬಿಟ್ಟುಕೊಡುವುದು.  ಅಂದರೆ, ನಮ್ಮ ಜೀವನದ ಮೇಲಿನ ಹಿಡಿತವನ್ನು ಬಿಟ್ಟುಕೊಟ್ಟು, ಆ ನಿಪುಣ ಬೆಳೆಗಾರರು ಅದರ ಹೊಣೆಯನ್ನು ವಹಿಸಿಕೊಳ್ಳಲು ಅವಕಾಶ ಕೊಡುವುದು.  ಅಂದರೆ, ನಮ್ಮ ಮೇಲೆ ನಮಗಿರುವ ಭರವಸೆಗಿಂತಲೂ ಬಹಳ ಹೆಚ್ಚಿನ ಭರವಸೆಯನ್ನು ಅವರಲ್ಲಿ ಇಡುವುದು.  ಇದಕ್ಕಾಗಿ ನಾವು ನಮ್ಮ ಸ್ವಾರ್ಥಕ್ಕೆ ನಿಜವಾಗಿಯೂ ಸಾಯಬೇಕು; ಕೊಂಬೆಯೊಂದು ದ್ರಾಕ್ಷಾಲತೆಯನ್ನು ಅವಲಂಬಿಸಿರುವಂತೆಯೇ ನಾವು ಸಂಪೂರ್ಣವಾಗಿ ದೇವರನ್ನು ಅವಲಂಬಿಸಿದ್ದೇವೆ ಎಂದು ಒಪ್ಪಿಕೊಳ್ಳುವ ನಿಜವಾದ ದೀನತೆ ನಮ್ಮಲ್ಲಿರಬೇಕು.  ದ್ರಾಕ್ಷಾಲತೆಯಿಲ್ಲದೆ ನಾವು ಬಾಡಿ ಸಾಯುತ್ತೇವೆ.  ದ್ರಾಕ್ಷಾಲತೆಗೆ ದೃಢವಾಗಿ ಅಂಟಿಕೊಂಡಿರುವುದೇ ಜೀವಕ್ಕೆ ಏಕೈಕ ದಾರಿ.

ನಿಮ್ಮ ಜೀವನದಲ್ಲಿ ಪ್ರಭುವಿಗೆ ಸೇರದ ಎಲ್ಲವನ್ನೂ ಅವರು ಸಮರಿ ತೆಗೆದುಹಾಕಲು ನೀವು ಅವಕಾಶ ಕೊಡುವಂತೆ ಇಂದು ಪ್ರಾರ್ಥಿಸಿ.  ಅವರಲ್ಲಿ ಮತ್ತು ಅವರ ದೈವಿಕ ಯೋಜನೆಯಲ್ಲಿ ಭರವಸೆ ಇಡಿ; ನಿಮ್ಮ ಮೂಲಕ ದೇವರು ತರಲು ಬಯಸುವ ಒಳ್ಳೆಯ ಫಲವನ್ನು ಕೊಡುವುದಕ್ಕೆ ಇದೇ ಏಕೈಕ ದಾರಿ ಎಂಬುದನ್ನು ತಿಳಿದುಕೊಳ್ಳಿ.

ಪ್ರಭುವೇ, ನನ್ನ ಅಹಂಕಾರ ಮತ್ತು ಸ್ವಾರ್ಥವನ್ನೆಲ್ಲ ಸಮರಿ ತೆಗೆದುಹಾಕಬೇಕೆಂದು ನಿಮ್ಮನ್ನು ಪ್ರಾರ್ಥಿಸುತ್ತೇನೆ.  ಎಲ್ಲ ವಿಷಯಗಳಲ್ಲಿಯೂ ನಾನು ನಿಮ್ಮ ಕಡೆಗೆ ತಿರುಗುವಂತೆ ನನ್ನ ಅನೇಕ ಪಾಪಗಳಿಂದ ನನ್ನನ್ನು ಶುದ್ಧೀಕರಿಸಿ.  ನಿಮ್ಮನ್ನು ಅವಲಂಬಿಸಲು ನಾನು ಕಲಿಯುತ್ತಿರುವಾಗ, ನನ್ನ ಜೀವನದಲ್ಲಿ ನೀವು ಹೇರಳವಾದ ಒಳ್ಳೆಯ ಫಲವನ್ನು ನೀಡಲು ಆರಂಭಿಸಿರಿ.  ಯೇಸುವೇ, ನಾನು ನಿಮ್ಮಲ್ಲಿ ಭರವಸೆ ಇಡುತ್ತೇನೆ.

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಎಲ್ಲ ಸಂತರು/ಹಬ್ಬಗಳು

ಇಂದಿನ ಸಂತರು – ಫಾತಿಮಾ ಮಾತೆ

ದಿವ್ಯಬಲಿಯ ವಾಚನಗಳ ಆಯ್ಕೆಗಳು

ಚಿತ್ರ: ನಿಜವಾದ ದ್ರಾಕ್ಷಾಲತೆಯಾದ ಕ್ರಿಸ್ತ


ದೇವರೊಂದಿಗಿನ ಐಕ್ಯದೆಡೆಗೆ ಅನುಭಾವದ ಪಯಣ:
ಶಿಲುಬೆಯ ಸಂತ ಯೋವಾನ್ನರ ಆಧ್ಯಾತ್ಮಿಕ ಜ್ಞಾನ