ಮೇ 26, 2020
ಪಾಸ್ಕಕಾಲದ ಏಳನೆಯ ವಾರದ ಮಂಗಳವಾರ
ಇಂದಿನ ವಾಚನಗಳು

ಯೇಸು ಸ್ವರ್ಗದತ್ತ ಕಣ್ಣೆತ್ತಿ, “ಪಿತನೇ, ಗಳಿಗೆ ಬಂದಿದೆ. ನಿಮ್ಮ ಪುತ್ರನನ್ನು ಮಹಿಮೆಪಡಿಸಿರಿ; ಆಗ ನಿಮ್ಮ ಪುತ್ರನು ನಿಮ್ಮನ್ನು ಮಹಿಮೆಪಡಿಸುವನು” ಎಂದರು. ಯೋಹಾನ 17:1
ಪುತ್ರನನ್ನು ಮಹಿಮೆಪಡಿಸುವುದು ಪಿತನ ಕಾರ್ಯವಾಗಿದೆ; ಆದರೆ ನಾವೆಲ್ಲರೂ ಗಮನಹರಿಸಬೇಕಾದ ಕಾರ್ಯವೂ ಆಗಿದೆ!
ಮೊದಲನೆಯದಾಗಿ, ಯೇಸು ಹೇಳುವ “ಗಳಿಗೆ” ಅವರ ಶಿಲುಬೆಮರಣದ ಗಳಿಗೆ ಎಂಬುದನ್ನು ನಾವು ಅರಿತುಕೊಳ್ಳಬೇಕು. ಮೊದಲ ನೋಟಕ್ಕೆ ಇದು ದುಃಖದ ಕ್ಷಣದಂತೆ ತೋರಬಹುದು. ಆದರೆ ದೈವಿಕ ದೃಷ್ಟಿಯಿಂದ, ಯೇಸು ಇದನ್ನು ತಮ್ಮ ಮಹಿಮೆಯ ಗಳಿಗೆಯಾಗಿ ಕಾಣುತ್ತಾರೆ. ಪಿತನ ಚಿತ್ತವನ್ನು ಅವರು ಪರಿಪೂರ್ಣವಾಗಿ ನೆರವೇರಿಸಿದ್ದರಿಂದ, ಸ್ವರ್ಗದಲ್ಲಿರುವ ಪಿತನು ಅವರನ್ನು ಮಹಿಮೆಪಡಿಸುವ ಗಳಿಗೆ ಇದು. ಲೋಕದ ರಕ್ಷಣೆಗಾಗಿ ಅವರು ತಮ್ಮ ಮರಣವನ್ನು ಸಂಪೂರ್ಣವಾಗಿ ಸ್ವೀಕರಿಸಿದರು.
ನಾವು ಇದನ್ನು ನಮ್ಮ ಮಾನವ ದೃಷ್ಟಿಯಿಂದಲೂ ನೋಡಬೇಕು. ನಮ್ಮ ದೈನಂದಿನ ಬದುಕಿನ ದೃಷ್ಟಿಯಿಂದ ನೋಡುವಾಗ, ಈ “ಗಳಿಗೆ”ಯನ್ನು ನಾವು ನಿರಂತರವಾಗಿ ಸ್ವೀಕರಿಸಿ ಫಲಪ್ರದಗೊಳಿಸಬಹುದು ಎಂಬುದನ್ನು ಅರಿಯಬೇಕು. ಯೇಸುವಿನ “ಗಳಿಗೆ”ಯನ್ನು ನಾವು ಸದಾ ನಮ್ಮ ಬದುಕಿನಲ್ಲಿ ಜೀವಿಸಬೇಕು. ಹೇಗೆ? ನಮ್ಮ ಬದುಕಿನ ಶಿಲುಬೆಯನ್ನು ನಿರಂತರವಾಗಿ ಸ್ವೀಕರಿಸುವ ಮೂಲಕ; ಆಗ ಈ ಶಿಲುಬೆಯೂ ಮಹಿಮೀಕರಣದ ಕ್ಷಣವಾಗುತ್ತದೆ. ಹೀಗೆ ಮಾಡುವಾಗ, ನಮ್ಮ ಶಿಲುಬೆಗಳು ದೈವಿಕ ಆಯಾಮವನ್ನು ಪಡೆದು, ದೈವಿಕವಾಗಿ ರೂಪಾಂತರಗೊಂಡು ದೇವರ ಅನುಗ್ರಹದ ಮೂಲವಾಗುತ್ತವೆ.
ನಾವು ಸಹಿಸಿಕೊಳ್ಳುವ ಪ್ರತಿಯೊಂದು ಸಂಕಟವೂ, ನಾವು ಹೊರುವ ಪ್ರತಿಯೊಂದು ಶಿಲುಬೆಯೂ ಕ್ರಿಸ್ತನ ಶಿಲುಬೆಯನ್ನು ಪ್ರಕಟಪಡಿಸುವ ಅವಕಾಶವಾಗಿರುವುದೇ ಸುವಾರ್ತೆಯ ಸೌಂದರ್ಯ. ನಮ್ಮ ಬದುಕಿನಲ್ಲಿ ಅವರ ಯಾತನೆಯನ್ನೂ ಮರಣವನ್ನೂ ಜೀವಿಸುವ ಮೂಲಕ ನಿರಂತರವಾಗಿ ಅವರನ್ನು ಮಹಿಮೆಪಡಿಸಲು ಅವರೇ ನಮ್ಮನ್ನು ಕರೆಯುತ್ತಾರೆ.
ನೀವು ಸಹಿಸಿಕೊಳ್ಳುವ ಕಷ್ಟಗಳ ಕುರಿತು ಇಂದು ಚಿಂತಿಸಿ. ಮತ್ತು ನೀವು ಕ್ರಿಸ್ತನಿಗೆ ಅವಕಾಶ ನೀಡಿದರೆ, ಆ ಕಷ್ಟಗಳು ಅವರ ಉದ್ಧಾರಕ ಪ್ರೀತಿಯಲ್ಲಿ ಪಾಲುಪಡೆಯಬಲ್ಲವು ಎಂಬುದನ್ನು ತಿಳಿದುಕೊಳ್ಳಿ.
ಯೇಸುವೇ, ನನ್ನ ಶಿಲುಬೆಯನ್ನೂ ನನ್ನ ಕಷ್ಟಗಳನ್ನೂ ನಿಮಗೆ ಸಮರ್ಪಿಸುತ್ತೇನೆ. ನೀವು ದೇವರು; ಎಲ್ಲವನ್ನೂ ಮಹಿಮೆಯಾಗಿ ಪರಿವರ್ತಿಸಲು ನೀವು ಶಕ್ತರು. ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.
ಪವಿತ್ರಾತ್ಮರಿಗೆ ನೊವೇನಾ
ಪಂಚಾಶತ್ತಮ ಹಬ್ಬದ ಸಿದ್ಧತೆಗಾಗಿ ಪ್ರಾರ್ಥಿಸಲಾಗುತ್ತದೆ
ಐದನೆಯ ದಿನ – ಮಂಗಳವಾರ, ಮೇ 26
ಇಂದಿನ ಸಂತರು – ಸಂತ ಫಿಲಿಪ್ ನೇರಿ, ಯಾಜಕ




