ಕನ್ನಡ

ನಿಮ್ಮ ಶತ್ರುಗಳನ್ನು ಪ್ರೀತಿಸಿ 

ಜೂನ್ 14, 2022
ಸಾಮಾನ್ಯ ಕಾಲದ ಹನ್ನೊಂದನೆಯ ವಾರದ ಮಂಗಳವಾರ
ಇಂದಿನ ವಾಚನಗಳು

ವೀಡಿಯೊ

“ಆದರೆ ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ಶತ್ರುಗಳನ್ನು ಪ್ರೀತಿಸಿ ಮತ್ತು ನಿಮ್ಮನ್ನು ಹಿಂಸಿಸುವವರಿಗಾಗಿ ಪ್ರಾರ್ಥಿಸಿ; ಹೀಗೆ ನೀವು ನಿಮ್ಮ ಪರಲೋಕದ ತಂದೆಯ ಮಕ್ಕಳಾಗುವಿರಿ.”  ಮತ್ತಾಯ 5:44-45a

ನಮ್ಮ ಪ್ರಭುವಿನ ಈ ಆಜ್ಞೆಯನ್ನು ಪಾಲಿಸುವುದು ಸುಲಭವಲ್ಲ.  ಆದರೆ ಇದು ಪ್ರೀತಿಯ ಆಜ್ಞೆಯಾಗಿದೆ.

ಮೊದಲನೆಯದಾಗಿ, ನಮ್ಮ ಶತ್ರುಗಳನ್ನು ಪ್ರೀತಿಸುವಂತೆ ಅವರು ನಮ್ಮನ್ನು ಕರೆಯುತ್ತಾರೆ.  ನಮ್ಮ ಶತ್ರುಗಳು ಯಾರು?  ನಾವು ಉದ್ದೇಶಪೂರ್ವಕವಾಗಿ ದ್ವೇಷಿಸಲು ಆರಿಸಿಕೊಂಡವರನ್ನು “ಶತ್ರುಗಳು” ಎಂದು ಕರೆಯುವುದಾದರೆ, ಅಂಥವರು ನಮಗೆ ಇಲ್ಲವೆಂದು ಆಶಿಸೋಣ.  ಆದರೆ ನಮ್ಮ ಜೀವನದಲ್ಲಿ ಕೆಲವರ ಮೇಲೆ ಕೋಪಗೊಳ್ಳುವ ಪ್ರಲೋಭನೆ ನಮಗಿರಬಹುದು; ಅವರನ್ನು ಪ್ರೀತಿಸುವುದು ನಮಗೆ ಕಷ್ಟವಾಗಬಹುದು.  ಬಹುಶಃ ಯಾರೊಂದಿಗೆ ಹೊಂದಿಕೊಂಡು ಬಾಳಲು ನಾವು ಹೋರಾಡುತ್ತೇವೆಯೋ, ಅಂಥ ಯಾರನ್ನಾದರೂ ನಮ್ಮ ಶತ್ರುಗಳೆಂದು ಪರಿಗಣಿಸಬಹುದು.

ಅವರನ್ನು ಪ್ರೀತಿಸುವುದೆಂದರೆ ನಾವು ಅವರ ಆಪ್ತ ಸ್ನೇಹಿತರಾಗಲೇಬೇಕೆಂದೇನಿಲ್ಲ; ಆದರೆ ಅವರ ಬಗ್ಗೆ ಕಾಳಜಿ, ಹಿತಚಿಂತನೆ, ಅರ್ಥಮಾಡಿಕೊಳ್ಳುವ ಮನಸ್ಸು ಮತ್ತು ಕ್ಷಮೆಯುಳ್ಳ ನಿಜವಾದ ಪ್ರೀತಿಭಾವವನ್ನು ಬೆಳೆಸಿಕೊಳ್ಳಲು ಶ್ರಮಿಸಬೇಕು ಎಂದರ್ಥ.  ಎಲ್ಲರ ಬಗ್ಗೆಯೂ ಇಂಥ ಭಾವನೆ ಹೊಂದುವುದು ಕಷ್ಟವಾಗಬಹುದು; ಆದರೂ ಇದೇ ನಮ್ಮ ಗುರಿಯಾಗಿರಬೇಕು.

ಈ ಆಜ್ಞೆಯ ಎರಡನೆಯ ಭಾಗವು ನಮಗೆ ನೆರವಾಗುತ್ತದೆ.  ನಮ್ಮನ್ನು ಹಿಂಸಿಸುವವರಿಗಾಗಿ ಪ್ರಾರ್ಥಿಸುವುದು, ನಾವು ಬೆಳೆಸಿಕೊಳ್ಳಬೇಕಾದ ಯೋಗ್ಯವಾದ ಪ್ರೀತಿ ಮತ್ತು ವಾತ್ಸಲ್ಯದಲ್ಲಿ ಬೆಳೆಯಲು ನಮಗೆ ಸಹಾಯ ಮಾಡುತ್ತದೆ.  ಪ್ರೀತಿಯ ಈ ಅಂಶವು ಬಹಳ ಸ್ಪಷ್ಟವಾಗಿದೆ, ಆದರೆ ಅದನ್ನು ಪಾಲಿಸುವುದು ಕೂಡ ಬಹಳ ಕಷ್ಟವಾಗಿದೆ.

ನೀವು ಪ್ರೀತಿಸಲು ಬಹಳ ಕಷ್ಟಪಡುವವರ ಬಗ್ಗೆ ಯೋಚಿಸಿ.  ಯಾರ ಮೇಲೆ ನಿಮಗೆ ಕೋಪವಿದೆಯೋ ಅವರ ಬಗ್ಗೆ ಯೋಚಿಸಿ.  ಅವರು ಕುಟುಂಬದ ಸದಸ್ಯರಾಗಿರಬಹುದು, ಕೆಲಸದ ಸ್ಥಳದ ಯಾರಾದರೂ ಆಗಿರಬಹುದು, ನೆರೆಹೊರೆಯವರಾಗಿರಬಹುದು ಅಥವಾ ನಿಮ್ಮ ಹಿಂದಿನ ಜೀವನದಲ್ಲಿ ನೀವು ಎಂದಿಗೂ ಸಂಧಾನ ಮಾಡಿಕೊಳ್ಳದ ವ್ಯಕ್ತಿಯಾಗಿರಬಹುದು.  ಹೊರಗಾಗಲಿ ಒಳಗಾಗಲಿ, ಹೊಂದಿಕೊಂಡು ಬಾಳಲು ನೀವು ಹೋರಾಡುವ ಕನಿಷ್ಠ ಒಬ್ಬರಾದರೂ, ಬಹುಶಃ ಒಂದಕ್ಕಿಂತ ಹೆಚ್ಚು ಜನರಾದರೂ ಇದ್ದಾರೆಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವುದು ಈ ಸುವಾರ್ತಾ ಭಾಗಕ್ಕೆ ಅನುಗುಣವಾಗಿದೆ.  ಇದನ್ನು ಒಪ್ಪಿಕೊಳ್ಳುವುದು ಸರಳವಾಗಿ ಪ್ರಾಮಾಣಿಕತೆಯ ಒಂದು ಕೃತ್ಯವಾಗಿದೆ.  

ಆ ವ್ಯಕ್ತಿ ಅಥವಾ ವ್ಯಕ್ತಿಗಳನ್ನು ಗುರುತಿಸಿದ ಬಳಿಕ, ನೀವು ಅವರಿಗಾಗಿ ಪ್ರಾರ್ಥಿಸುತ್ತೀರೋ ಎಂದು ಯೋಚಿಸಿ.  ಪ್ರಾರ್ಥನೆಯಲ್ಲಿ ಅವರನ್ನು ದೇವರಿಗೆ ಸಮರ್ಪಿಸಲು ನೀವು ನಿಯಮಿತವಾಗಿ ಸಮಯ ಮೀಸಲಿಡುತ್ತೀರಾ?  ದೇವರು ಅವರ ಮೇಲೆ ತಮ್ಮ ಅನುಗ್ರಹವನ್ನೂ ಕರುಣೆಯನ್ನೂ ಸುರಿಸಲೆಂದು ಪ್ರಾರ್ಥಿಸುತ್ತೀರಾ?  ಹೀಗೆ ಮಾಡುವುದು ಕಷ್ಟವಾಗಬಹುದು; ಆದರೆ ನೀವು ಮಾಡಬಹುದಾದ ಅತ್ಯಂತ ಹಿತಕರ ಕೃತ್ಯಗಳಲ್ಲಿ ಇದು ಒಂದಾಗಿದೆ.  ಅವರ ಬಗ್ಗೆ ಪ್ರೀತಿ ಮತ್ತು ವಾತ್ಸಲ್ಯವನ್ನು ತೋರಿಸುವುದು ಕಷ್ಟವಾಗಬಹುದು; ಆದರೆ ಅವರಿಗಾಗಿ ಪ್ರಾರ್ಥಿಸಲು ಪ್ರಜ್ಞಾಪೂರ್ವಕವಾಗಿ ನಿರ್ಧರಿಸುವುದು ಕಷ್ಟವಲ್ಲ.

ಯಾರೊಂದಿಗೆ ಹೊಂದಿಕೊಂಡು ಬಾಳಲು ನಮಗೆ ಕಷ್ಟವಾಗುತ್ತದೆಯೋ ಅವರಿಗಾಗಿ ಪ್ರಾರ್ಥಿಸುವುದು, ಅವರ ಬಗ್ಗೆ ನಮ್ಮ ಹೃದಯಗಳಲ್ಲಿ ನಿಜವಾದ ಪ್ರೀತಿ ಮತ್ತು ಕಾಳಜಿಯನ್ನು ಬೆಳೆಸಲು ದೇವರಿಗೆ ಅವಕಾಶ ನೀಡುವ ಮುಖ್ಯ ಮಾರ್ಗವಾಗಿದೆ.  ನಮ್ಮ ಭಾವನೆಗಳನ್ನೂ ಮನೋಭಾವಗಳನ್ನೂ ದೇವರು ತಿದ್ದಿರೂಪಿಸಲು ಅವಕಾಶ ನೀಡುವ ಮಾರ್ಗವಿದು; ಆಗ ನಾವು ಇನ್ನು ಮುಂದೆ ಕೋಪದ ಅಥವಾ ದ್ವೇಷದ ಭಾವನೆಗಳಿಗೆ ಅಂಟಿಕೊಂಡಿರಬೇಕಾಗುವುದಿಲ್ಲ.  

ಯಾರೊಂದಿಗೆ ಹೊಂದಿಕೊಂಡು ಬಾಳಲು ನೀವು ಅತಿಯಾಗಿ ಹೋರಾಡುತ್ತೀರೋ ಆ ವ್ಯಕ್ತಿಗಾಗಿ ಪ್ರಾರ್ಥಿಸಲು ಇಂದು ನಿಮ್ಮನ್ನು ಸಮರ್ಪಿಸಿಕೊಳ್ಳಿ.  ಈ ಪ್ರಾರ್ಥನೆಯು ಅವರ ಮೇಲಿನ ನಿಮ್ಮ ಪ್ರೀತಿಯನ್ನು ಒಂದೇ ರಾತ್ರಿಯಲ್ಲಿ ಬದಲಾಯಿಸದಿರಬಹುದು. ಆದರೆ ಪ್ರತಿದಿನ ಈ ರೀತಿಯ ಪ್ರಾರ್ಥನೆಗೆ ನೀವು ಬದ್ಧರಾಗಿದ್ದರೆ, ಕಾಲಕ್ರಮೇಣ ದೇವರು ನಿಮ್ಮ ಹೃದಯವನ್ನು ನಿಧಾನವಾಗಿ ಬದಲಾಯಿಸುವರು. ಎಲ್ಲ ಜನರ ಮೇಲೂ ನೀವು ಹೊಂದಿರಬೇಕೆಂದು ಅವರು ಬಯಸುವ ಪ್ರೀತಿಗೆ ಅಡ್ಡಿಯಾಗಬಹುದಾದ ಕೋಪ ಮತ್ತು ಮನನೋವಿನ ಹೊರೆಯಿಂದ ನಿಮ್ಮನ್ನು ಮುಕ್ತಗೊಳಿಸುವರು.

ಪರಿಪೂರ್ಣ ಪ್ರೀತಿಯ ಪ್ರಭುವೇ, ನಾನು ಯಾರಿಗಾಗಿ ಪ್ರಾರ್ಥಿಸಬೇಕೆಂದು ನೀನು ಬಯಸುತ್ತೀಯೋ ಆ ವ್ಯಕ್ತಿಗಾಗಿ ನಾನು ಪ್ರಾರ್ಥಿಸುತ್ತೇನೆ.  ಎಲ್ಲ ಜನರನ್ನೂ ಪ್ರೀತಿಸಲು ನನಗೆ ನೆರವಾಗು; ವಿಶೇಷವಾಗಿ ಪ್ರೀತಿಸಲು ಕಷ್ಟವಾಗುವವರನ್ನು ಪ್ರೀತಿಸಲು ನನಗೆ ನೆರವಾಗು.  ಅವರ ಕುರಿತಾದ ನನ್ನ ಭಾವನೆಗಳನ್ನು ಸರಿಪಡಿಸು ಮತ್ತು ಎಲ್ಲ ಕೋಪದಿಂದ ಮುಕ್ತನಾಗಿರಲು ನನಗೆ ನೆರವಾಗು.  ಯೇಸುವೇ, ನಾನು ನಿನ್ನಲ್ಲಿ ಭರವಸೆಯಿಡುತ್ತೇನೆ.

ಯೇಸುವಿನ ಪವಿತ್ರ ಹೃದಯಕ್ಕೆ ನೊವೇನಾ
ನೊವೇನಾ ದಿನಾಂಕಗಳು: ಜೂನ್ 15-23, 2022
ಜೂನ್ 24, 2022: ಯೇಸುವಿನ ಪವಿತ್ರ ಹೃದಯದ ಮಹೋತ್ಸವ

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಇಂದಿನ ಸಂತರು/ಹಬ್ಬಗಳು

ದಿವ್ಯಬಲಿಯ ವಾಚನಗಳ ಆಯ್ಕೆಗಳು

ಮೇಲಿನ ಆಯ್ದ ಚಿತ್ರ: ಹಿಯೆರೋನಿಮಸ್ ಬಾಷ್ ಅವರ ‘ಮುಳ್ಳಿನ ಕಿರೀಟಧಾರಿ ಕ್ರಿಸ್ತ’, ವಿಕಿಪೀಡಿಯಾ ಮೂಲಕ